ನೀರುಜಿಂಕೆ
	ಆರ್ಟಿಯೊಡ್ಯಾಕ್ಟಿಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದ ಜಿಂಕೆ (ಚೈನೀಸ್ ವಾಟರ್ ಡಿಯರ್). ಹೈಡ್ರೊಪೋಟಸ್ ಇನರ್ಮಿಸ್ ಇದರ ವೈಜ್ಞಾನಿಕ ಹೆಸರು. ಕೊರಿಯ ಹಾಗೂ ಚೀನಾದ ಹಲವು ದ್ವೀಪಗಳು ಮತ್ತು ಯಾಂಗ್ಟ್ಸೀ ನದಿಯ ದಂಡೆಯ ಪ್ರದೇಶಗಳಲ್ಲಿ ವಾಸಿಸುತ್ತದೆ. ನದಿಯ ಅಂಚಿನ ಜೌಗು ಪ್ರದೇಶ ಇವುಗಳ ಮೆಚ್ಚಿನ ಆವಾಸಸ್ಥಾನ. ಕೆಲವೊಮ್ಮೆ ಬೆಟ್ಟದ ಕಿಬ್ಬಿಗಳಲ್ಲಿನ ಉದ್ದ ಹುಲ್ಲಿನ ನಡುವೆ ಕೃಷಿ ಭೂಮಿಗಳಲ್ಲೂ ವಾಸಿಸುವುದುಂಟು. ಇದರ ಉದ್ದ ಸುಮಾರು 1ಮೀ; ಎತ್ತರ 50 ಸೆಂಮೀ; ತೂಕ 10 ಕೆಜಿ. ಮೈಬಣ್ಣ ಹಳದಿ ಕಂದು ಜೊತೆಗೆ ಬೆನ್ನಮೇಲೆ ಸೂಕ್ಷ್ಮವಾದ ಕಪ್ಪುಚುಕ್ಕೆಗಳುಂಟು. ಮೂತಿ ಬೂದು ಇಲ್ಲವೆ ಕೆಂಪು ಮಿಶ್ರ ಕಂದು. ಉದರ ಭಾಗ ಬಿಳಿ. ಮೈಮೇಲೆ (ಮುಖ್ಯವಾಗಿ ಪಾಶ್ರ್ವಗಳಲ್ಲಿ ಪೃಷ್ಠಭಾಗದಲ್ಲಿ) ದಟ್ಟ ಕೂದಲುಂಟು. ಗಂಡಿನಲ್ಲಾಗಲಿ ಹೆಣ್ಣಿನಲ್ಲಾಗಲಿ ಕೊಂಬುಗಳೇ ಇಲ್ಲ. ಗಂಡಿನಲ್ಲಿ ಮಾತ್ರ ಮೇಲ್ದವಡೆಯ ಕೋರೆಹಲ್ಲುಗಳು ಉದ್ದವಾಗಿದ್ದು ಹೊರಚಾಚಿಕೊಂಡಿದೆ. ಗಂಡು ಹೆಣ್ಣುಗಳೆರಡರಲ್ಲೂ ತೊಡೆಸಂದಿಯಲ್ಲಿ ಎರಡು ಈ ಪದ ಗಜ್ಜಲು ಗ್ರಂಥಿಗಳಿವೆ. ಸರ್ವಿಡೀ ಕುಟುಂಬದ ಇನ್ನಾವ ಜಿಂಕೆಗಳಲ್ಲೂ ಇಂಥ ಗ್ರಂಥಿಗಳಿಲ್ಲ. ಹುಲ್ಲು, ಕಾಯಿ, ಹಣ್ಣು, ಜೊಂಡು ಇವೇ ಇದರ ಪ್ರಧಾನ ಆಹಾರ. ಶತ್ರುಗಳಿಂದ ತಪ್ಪಿಸಿಕೊಳ್ಳುವಾಗ ಮೊಲಗಳಂತೆ ಜಿಗಿದು ಹಾರುತ್ತ ಓಡುವುದು ಇದರ ಗುಣ. ನೀರುಜಿಂಕೆ ಇತರ ಜಿಂಕೆಗಳಿಗಿಂತ ಹೆಚ್ಚು ಮರಿ ಹಾಕುತ್ತದೆ. ಒಂದು ಸಲಕ್ಕೆ 4-7 ಮರಿಗಳು ಹುಟ್ಟುವುವು. ಹೊಸದಾಗಿ ಹುಟ್ಟಿದ ಮರಿಗಳ ಮೈಮೇಲೆ ಚುಕ್ಕೆಗಳೂ ಪಟ್ಟೆಗಳೂ ಇರುವುವು. ನೀರುಜಿಂಕೆಗಳನ್ನು ತಿನ್ನುವುದು ರೂಢಿಯಲ್ಲಿಲ್ಲ. ಇವನ್ನು ಸಾಕುವುದು ಸುಲಭ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ